ದೀಪಾವಳಿ (Deepavali) ಹಬ್ಬದ ಮೊದಲ ದಿನ ಇವತ್ತು ಲಕ್ಷ್ಮೀ ದೇವಿಯ ಆರಾಧನೆಯ ದಿನ. ದೀಪಾವಳಿಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸರ್ಕಾರ ಕರ್ನಾಟಕಕ್ಕೆ (Karnataka) ಅವಕೃಪೆ ತೋರಿಸಿದೆ.
ಮಳೆಯಿಂದ ಉಂಟಾಗಿರುವ ಹಾನಿ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ (SDRF) ಕೇಂದ್ರ ಸರ್ಕಾರ ತನ್ನ ಪಾಲನ್ನು ಬಿಡುಗಡೆ ಮಾಡಿದೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಒಟ್ಟು 1,950 ಕೋಟಿ ರೂಪಾಯಿ ಮೊತ್ತದ ಪರಿಹಾರ ಬಿಡುಗಡೆಗೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರೂ ಆಗಿರುವ ಅಮಿತ್ ಶಾ (Union Home Minister Amit Sha) ಅವರು ಅನುಮೋದನೆ ನೀಡಿದ್ದಾರೆ.
ಈ 1,950 ಕೋಟಿ ರೂಪಾಯಿ ಪರಿಹಾರದಲ್ಲಿ ಕರ್ನಾಟಕಕ್ಕೆ ಸಿಗುವುದು ಮಾತ್ರ 348 ಕೋಟಿ ರೂ. ಬಿಜೆಪಿ ಆಡಳಿತವಿರುವ ಪಕ್ಕದ ಮಹಾರಾಷ್ಟ್ರಕ್ಕೆ ಬರೋಬ್ಬರೀ 1,566 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಈ ಹಣವನ್ನು ಪ್ರವಾಹ, ಭೂ ಕುಸಿತ ಮತ್ತು ಮೇಘಸ್ಫೋಟದಿಂದ ಆಗಿರುವ ಹಾನಿಯ ಪರಿಹಾರಕ್ಕೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಈ ವರ್ಷ ಕೇಂದ್ರ ಸರ್ಕಾರ 27 ರಾಜ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ 13,603 ಕೋಟಿ ರೂಪಾಯಿ ಮತ್ತು ಕೇಂದ್ರ ವಿಪತ್ತು ಪರಿಹಾರ ನಿಧಿಯಡಿಯಲ್ಲಿ (NDRF) 15 ರಾಜ್ಯಗಳಿಗೆ 2,189 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಇದಲ್ಲದೇ ರಾಜ್ಯ ವಿಪತ್ತು ತಡೆ ನಿಧಿಯಡಿಯಲ್ಲಿ (SDMF) 21 ರಾಜ್ಯಗಳಿಗೆ 4,571 ಕೋಟಿ ರೂಪಾಯಿ ಮತ್ತು ರಾಷ್ಟ್ರೀಯ ವಿಪತ್ತು ತಡೆ ನಿಧಿಯಡಿಯಲ್ಲಿ (NDMF) 9 ರಾಜ್ಯಗಳಿಗೆ 372 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.


