ನವೆಂಬರ್ 2ರಂದು RSS (Rashtriya Swayamsevak Sangh) ಪಥ ಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರ್‌ಎಸ್‌ಎಸ್‌ನ (RSS) ಪಥ ಸಂಚಲನ ಆಯೋಜಕರಿಗೆ ಕರ್ನಾಟಕ ಹೈಕೋರ್ಟ್‌ನ (Karnataka High Court) ಏಕಸದಸ್ಯ ಪೀಠ ಸೂಚಿಸಿದೆ.
ಚಿತ್ತಾಪೂರದಲ್ಲಿ (Chittapura) ಇವತ್ತು ಮಧ್ಯಾಹ್ನ 3 ಗಂಟೆಗೆ ಪಥ ಸಂಚಲನಕ್ಕೆ ಅನುಮತಿಯನ್ನು ನೀಡಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕರು ಅರ್ಜಿ ಸಲ್ಲಿಸಿದ್ದರು.
ರಜಾ ದಿನವಾದ ಇವತ್ತು ಭಾನುವಾರ ವಿಶೇಷ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಎಸ್ ಕಮಲ್ (Justice M S Kamal) ಅವರು ಈ ರೀತಿ ಆದೇಶ ನೀಡಿದ್ದಾರೆ.
ಪಥ ಸಂಚಲನದ ಆಯೋಜಕರು ಪಥ ಸಂಚಲನ ಸಾಗುವ ಮಾರ್ಗ, ಸ್ಥಳ ಮತ್ತು ಸಮಯದ ಮಾಹಿತಿಯನ್ನು ಒಳಗೊಂಡ ಹೊಸ ಅರ್ಜಿಯನ್ನು ಸಲ್ಲಿಸಬೇಕು. ಆ ಅರ್ಜಿಯಲ್ಲಿ ಅಕ್ಟೋಬರ್ 18ರಂದು ಕೇಳಲಾದ ಸ್ಪಷ್ಟನೆಗಳಿಗೆ ಆಯೋಜಕರು ಉತ್ತರ ನೀಡಬೇಕು. ಕಲ್ಬುರ್ಗಿ ಜಿಲ್ಲಾಧಿಕಾರಿ ಮತ್ತು ಚಿತ್ತಾಪೂರ ತಾಲೂಕು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರಿಗೂ ಪತ್ರವನ್ನು ಸಲ್ಲಿಸಬೇಕು. ಹೈಕೋರ್ಟ್ ತನ್ನ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಮತ್ತು ಕಾನೂನಿನನ್ವಯ ಪ್ರಸ್ತಾಪಿತ ಮಾರ್ಗದ ಬಗ್ಗೆ ಪರಿಗಣಿಸಿ ಸೂಕ್ತ ಸ್ಥಳವನ್ನು ಸೂಚಿಸಬೇಕು ಮತ್ತು ಅಕ್ಟೋಬರ್ 24ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು
ಎಂದು ಹೈಕೋರ್ಟ್ ನ್ಯಾಯಮೂರ್ತಿ ಕಮಲ್ ಅವರು ಕಲ್ಬುರ್ಗಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಪ್ರಕರಣದ ಮೆರಿಟ್ ಮೇಲೆ ಯಾವುದೇ ಆದೇಶಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅರ್ಜಿದಾರರ ಮನವಿಯನ್ನು ಅಕ್ಟೋಬರ್ 24ರಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಬೇರೆ ದಿನದಂದು ಪಥ ಸಂಚಲನ ಆಯೋಜನೆ ಸಾಧ್ಯವೇ ಎಂದು ಹೈಕೋರ್ಟ್ ವಿಚಾರಣೆ ವೇಳೆ ಅರ್ಜಿದಾರರನ್ನು ಕೇಳಿತು. ನವೆಂಬರ್ 2ರಂದು ಆಯೋಜನೆಗೆ ಸಿದ್ಧರಿದ್ದೇವೆ ಎಂದು ಅರ್ಜಿದಾರ ಪರ ವಕೀಲರು ಉತ್ತರಿಸಿದರು.
ಆರ್‌ಎಸ್‌ಎಸ್ ಸೌಹರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಬದ್ಧವಾಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 250 ಕಡೆ ಪಥ ಸಂಚಲನ ಮಾಡಿದ್ದೇವೆ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರದ ಜೊತೆಗೆ ಸಂಘಟನೆ ಪೂರ್ಣ ಸಹಕಾರವನ್ನು ನೀಡುತ್ತದೆ
ಎಂದು ಅರ್ಜಿದಾರರೂ ಆಗಿರುವ ಆರ್‌ಎಸ್‌ಎಸ್ ಕಲ್ಬುರ್ಗಿ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ (Ashok Patil) ಪರ ವಕೀಲರು ವಾದಿಸಿದರು.


