ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ದೆಹಲಿಗೆ ಹೋಗಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯ ಆಘಾತ ನೀಡಿದೆ. ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ೨೧ ಆರೋಪಿಗಳ ಪೈಕಿ ಎ೧೫ ಆರೋಪಿಯಾಗಿದ್ದ ವಿನಯ್ ಕುಲಕರ್ಣಿ ಒಳಗೊಂಡು ೧೭ ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ.
ಶಿಕ್ಷೆ ಪ್ರಮಾಣ ಬಗ್ಗೆ ನಾಳೆ ವಾದ-ಪ್ರತಿವಾದ ಮಂಡನೆಯಾಗಲಿದೆ. ಬಳಿಕವಷ್ಟೇ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಪ್ರಕರಣದ ಇಬ್ಬರು ಆರೋಪಿಗಳು ಮಾಫಿ ಸಾಕ್ಷಿಗಳಾಗಿ ಬದಲಾಗಿದ್ದರು. ಎ೧ ಆರೋಪಿಯಾಗಿದ್ದ ಬಸವರಾಜ ಮುತ್ತಗಿ, ಎ೧೭ ಆರೋಪಿ ಶಿವಾನಂದ ಮಾಫಿ ಸಾಕ್ಷಿಗಳಾಗಿ ಬದಲಾಗಿದ್ದರು. ಆದರೆ ಬಳಿಕ ಶಿವಾನಂದ ಪ್ರತಿಕೂಲ ಸಾಕ್ಷಿ ನುಡಿದ್ದರ ಹಿನ್ನೆಲೆಯಲ್ಲಿ ಶಿವಾನಂದನನ್ನೂ ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ.
ಪ್ರಕರಣದ ಎ೨೦ ಆರೋಪಿ ವಾಸುದೇವ ನಿಲೇಕಣಿ, ಎ೨೧ ಆರೋಪಿ ಸೋಮಶೇಖರ ಇವರಿಬ್ಬರ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿದೆ.
ದೋಷಿಗಳು:
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ, ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ್, ಮಹಾಬಲೇಶ್ವರ್ ಅಲಿಯಾಸ್ ಮುದಕ, ಸಂತೋಷ್, ದಿನೇಶ್, ಅಶ್ವತ್ಥ್, ಸುನಿಲ್, ನಜೀರ್ ಅಹಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರು ಮಾಮ, ವಿಕಾಸ್ ಕಲ್ಬುರ್ಗಿ, ಚನ್ನಕೇಶವ ಟಿಂಗರಿಕರ್.
೨೦೧೬ರ ಜೂನ್ ೧೫ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಜಿಮ್‌ನಲ್ಲಿ ಯೋಗೀಶ್ ಗೌಡ ಕೊಲೆಯಾಗಿತ್ತು. ೨೦೧೯ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು.


