ಕೆಎಎಸ್ ಅಧಿಕಾರಿ ಶೀತಲ್ ಟಿ.ಎಸ್.ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆಯಲ್ಲಿ ಶೀತಲ್ ಅವರಿಗೆ ಆಗಿರುವ ಸಮಸ್ಯೆ ಏನು..? ಅವರಿಗೆ ಸಮಸ್ಯೆ ಆಗಿದ್ದ ಅಧಿಕಾರಿ ಅಥವಾ ಇತರರು ಯಾರು..? ಯಾರತ್ತ ಬೆರಳು ತೋರಿಸ್ತಿದ್ದಾರೆ ಶೀತಲ್..? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಶೀತಲ್ ಅವರು ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಿಯೋಜನೆಯಾಗಿದ್ದರು. ಅವರನ್ನು ಮೇ ೨೯ರಂದು ಹೊಸಕೋಟೆ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಮೇ ೩೧ರಂದು ಅವರು ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ವರ್ಗಾವಣೆ ಆದ ೧೭ ದಿನಗಳ ಬಳಿಕ ಶೀತಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅತ್ಯಂತ ಮಾರ್ಮಿಕವಾಗಿ ಪೋಸ್ಟ್‌ನ್ನು ಹಾಕಿಕೊಂಡಿದ್ದಾರೆ. ನಾಯಕತ್ವವೇ ಸಮಸ್ಯೆ ಆಗಿದ್ದ ಕಡೆಯಿಂದ ನಾಯಕತ್ವವೇ ಪರಿಹಾರ ಆಗಿರುವ ಕಡೆಗೆ ತೆರಳಿದ್ದೇನೆ. #ಅಭಾರಿ #ಅತ್ಯಂತ ಕೆಟ್ಟದ್ದರಿಂದ #ಅತ್ಯಂತ ಒಳ್ಳೆಯದರ ಕಡೆಗೆ.
Moved from a place where leadership was the problem to a place where leadership is the solution.🥳 #Grateful #Worst☠️–>Best🎉
ಶೀತಲ್ ಅವರು ೨೦೨೨ರ ಬ್ಯಾಚ್‌ನ ಕೆಎಎಸ್ ಅಧಿಕಾರಿ. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಕೆಎಎಸ್ ಪರೀಕ್ಷೆಯಲ್ಲಿ ತಹಶೀಲ್ದಾರ್ ಗ್ರೇಡ್-೨ ವಿಭಾಗದಲ್ಲಿ ೨೪ನೇ ಸ್ಥಾನ ಪಡೆದಿದ್ದರು. ಸೇವೆಗೆ ಸೇರಿದ ಆರಂಭದಲ್ಲಿ ಇವರು ಬೆಂಗಳೂರಲ್ಲಿರುವ ಇಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಹಶೀಲ್ದಾರ್ ಗ್ರೇಡ್-೨ ಆಗಿ ನಿಯೋಜನೆಗೊಂಡಿದ್ದರು. ಆ ಬಳಿಕ ಇವರನ್ನು ನೆಲಮಂಗಲ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿತ್ತು. ಆದ್ರೆ ತಮ್ಮ ಮೊದಲ ಪೋಸ್ಟಿಂಗ್‌ನಲ್ಲಿ ಶಾಸಕರ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಮತ್ತೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮರು ವರ್ಗಾವಣೆ ಮಾಡಲಾಗಿತ್ತು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗ್ರೇಡ್-೨ ತಹಶೀಲ್ದಾರ್ ಆಗಿದ್ದ ಇವರನ್ನು ಹೊಸಕೋಟೆಗೆ ಈಗ ಗ್ರೇಡ್-೧ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.
ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಪರ ಪರೋಕ್ಷವಾಗಿ ಪೋಸ್ಟ್, ಬಳಿಕ ಡಿಲೀಟ್..!
ಜೂನ್ ೩ರಂದು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕೂಡಾ ಸಚಿವರಾಗಬಹುದು ಎಂಬ ಮಾಹಿತಿ ಇತ್ತು.
ಜೂನ್ ೫ರಂದು ಶಾಸಕ ಬಚ್ಚೇಗೌಡ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿದ್ದ ತಹಶೀಲ್ದಾರ್ ಶೀತಲ್. ʻಹೊಸಕೋಟೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಶರತ್ ಬಚ್ಚೇಗೌಡರವರನ್ನು ಸೌಹಾರ್ದಯುತವಾಗಿ ಭೇಟಿಯಾದ ಸಂದರ್ಭ.💐ʼ ಎಂದು ಶೀತಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಶಾಸಕ ಶರತ್ ಬಚ್ಚೇಗೌಡ ಅವರನ್ನು ಭೇಟಿಯಾಗುವುದಕ್ಕೂ ಮೊದಲು ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದ ಶೀತಲ್ ಅವರು ಬಳಿಕ ಆ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದರು.
ʻಜನರ ಕಲ್ಯಾಣಕ್ಕೆ ಬದ್ಧರಾಗಿರುವ, ಸುಸಂಸ್ಕೃತ, ದೂರದೃಷ್ಟಿಯುಳ್ಳ, ವಿನಯವಂತ ಮತ್ತು ಅಧಿಕಾರಿಗಳ ಬಗ್ಗೆ ಗೌರವ ಇಟ್ಟುಕೊಂಡಿರುವ ನಾಯಕನಿಗೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಬೇಕು; ಎಂದು ಬರೆದುಕೊಂಡಿದ್ದರು. ಆದರೆ ಆ ಬಳಿಕ ಆ ಪೋಸ್ಟ್‌ನ್ನೇ ಡಿಲೀಟ್ ಮಾಡಿದ್ದಾರೆ ಹೊಸಕೋಟೆ ತಹಶೀಲ್ದಾರ್ ಶೀತಲ್.

ವರ್ಗಾವಣೆ ಆಗಿರುವ ತಹಶೀಲ್ದಾರ್‌ಗೆ ಇನ್ನೂ ಪೋಸ್ಟಿಂಗ್ ಇಲ್ಲ:
ಹೊಸಕೋಟೆಗೆ ಶೀತಲ್ ಅವರು ತಹಶೀಲ್ದಾರ್ ಆಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವಿಚಿತ್ರ ಎಂದರೆ ಸೋಮಶೇಖರ್ ವರ್ಗಾವಣೆಯಾಗಿ ೧೭ ದಿನ ಕಳೆದರೂ ಇನ್ನೂ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.


